ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ : 1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಮುಖಪತ್ರ. 1916 ಏಪ್ರಿಲ್ನಿಂದ ಪ್ರಕಟವಾಗುತ್ತಿದೆ. ಪರಿಷತ್ತಿನ ಧ್ಯೇಯವೇ ಪತ್ರಿಕೆಯ ಧ್ಯೇಯವೂ ಆಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಪುನರುಜ್ಜೀವನ, ಜ್ಞಾನಪ್ರಸಾರ, ಕನ್ನಡ ಏಕೀಕರಣದ ಬಗ್ಗೆ ಪ್ರಚಾರ, ವಿದ್ವತ್ ಪ್ರೌಢಿಮೆಯಿಂದ ಕೂಡಿದ ಲೇಖನಗಳ ಪ್ರಕಟಣೆ-ಮುಂತಾದವು ಈ ಪತ್ರಿಕೆಯ ಧ್ಯೇಯಗಳು. ಇದರ ಮೊದಲ ಹೆಸರು ಕರ್ಣಾಟಕ ಸಾಹಿತ್ಯಪರಿಷತ್ಪತ್ರಿಕೆ. 1938ರಲ್ಲಿ ಬಿ.ಎಂ. ಶ್ರೀಕಂಠಯ್ಯನವರು ಪರಿಷತ್ತಿನ ಉಪಾಧ್ಯಕ್ಷರಾಗಿದ್ದಂದು ಪರಿಷತ್ತಿನ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದಾಗ ಈ ಪತ್ರಿಕೆಯ ಹೆಸರನ್ನೂ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಎಂದು ಮಾರ್ಪಡಿಸಲಾಯಿತು. ಪರಿಷತ್ಪತ್ರಿಕೆಯ ಮೊತ್ತಮೊದಲ ಸಂಚಿಕೆ ಡೆಮ್ಮಿ ರ ಆಕಾರದಲ್ಲಿದ್ದು ಅದರಲ್ಲಿ ನೂರು ಪುಟಗಳಿದ್ದವು. ಮೊದಲ ಸಂಚಿಕೆಯಲ್ಲಿ ಕರ್ಣಾಟಕ ಭಾಷಾ ಸಾಹಿತ್ಯಗಳು, ಗ್ರಾಂಥಿಕ ಪ್ರಯೋಗಗಳ ಏಕೀಕರಣ, ಸದುದ್ದೇಶಪಂಚಕ ಮುಂತಾದ ಉಪಯುಕ್ತ ಲೇಖನಗಳಿವೆ.

ಕೆಲವು ಕಾಲ ಈ ಪತ್ರಿಕೆ ತ್ರೈಮಾಸಿಕವಾಗಿ ಮುಂದುವರಿಯಿತಾದರೂ ಸ್ವಲ್ಪ ಕಾಲಾನಂತರ ಅದು ನಿರಂತರವಾಗಿ ವರ್ಷಕ್ಕೆ ಎರಡು ಸಂಚಿಕೆಗಳಂತೆ ಷಾಣ್ಮಾಸಿಕ ಪತ್ರಿಕೆಯಾಗಿ ಪ್ರಕಟವಾಗುತ್ತ ಬಂದಿದೆ. ಪತ್ರಿಕೆಯ ಮುಖಪುಟದಲ್ಲಿ ಇತ್ತೀಚೆಗೆ ವ್ಯತ್ಯಾಸವಾಗಿದೆ. ಮೊದಲಿನಿಂದಲೂ ಪರಿಷತ್ಪತ್ರಿಕೆಯ ರಕ್ಷಾಪುಟದ ಮೇಲೆ ನಾಟ್ಯಸರಸ್ವತಿಯ ದೊಡ್ಡ ಚಿತ್ರವಿರುತ್ತಿತ್ತು. ಈಗ ಅದರ ಬದಲು ಪರಿಷತ್ತಿನ ಕಟ್ಟಡದ ರೇಖಾಚಿತ್ರವಿದೆ. ಪತ್ರಿಕೆಯ ಆಕಾರ ಕೂಡ ಸ್ವಲ್ಪ ಕಿರಿದಾಗಿದೆ. ಈಗ ಅದು ಪ್ರಬುದ್ಧ ಕರ್ಣಾಟಕದ ಅಳತೆಗೆ ಹೊಂದಿಕೆಯಾಗಿದೆ. 
ಪರಿಷತ್ಪತ್ರಿಕೆಯನ್ನು ಪ್ರಾರಂಭದಲ್ಲಿ ಒಂದು ಸಂಪಾದಕ ಮಂಡಲಿ ನಡೆಸುತ್ತಿತ್ತು. ಅನಂತರ ಸಂಪಾದಕ ಮಂಡಲಿಯ ಜೊತೆಗೆ ಪ್ರತ್ಯೇಕ ಸಂಪಾದಕರನ್ನು ನೇಮಿಸಲಾಯಿತು. ಬೆಳ್ಳಾವೆ ವೆಂಕಟನಾರಾಯಣಪ್ಪ, ಎಂ.ಆರ್. ಶ್ರೀನಿವಾಸಮೂರ್ತಿ, ಡಿ.ಎಲ್. ನರಸಿಂಹಾಚಾರ್, ರಾಜಸೇವಾಸಕ್ತ ಡಿ.ಸಿ ಸುಬ್ಬರಾಯಪ್ಪ, ಡಾ.ಬಿ.ಶಿವಮೂರ್ತಿ, ಪ್ರೊ.ಕೆ.ಕೇಶವ ಭಟ್ಟ, ಲಕ್ಷ್ಮಣ ತೆಲಗಾವಿ, ಎಸ್. ಶ್ರೀನಿವಾಸನ್ ಮೊದಲಾದವರು ಪರಿಷತ್ಪತ್ರಿಕೆಯ ಸಂಪಾದಕರಾಗಿದ್ದರು. ಪರಿಷತ್ಪತ್ರಿಕೆ ಅನೇಕ ಜನ ಹಿರಿಯ ಸಾಹಿತಿಗಳ, ವಿಚಾರವಂತರ, ಕವಿಗಳ ಬರೆಹಗಳನ್ನು ಪ್ರಕಟಿಸಿದೆ. ಇಂದು ಗ್ರಂಥರೂಪದಲ್ಲಿ ಹೊರಬಂದಿರುವ ಹಲವು ಕೃತಿಗಳು ಮೊದಲು ಲೇಖನ ರೂಪದಲ್ಲಿ ಬಿಡಿಯಾಗಿ ಪರಿಷತ್ಪತ್ರಿಕೆಯಲ್ಲಿ ಬೆಳಕು ಕಂಡಿವೆ. ಅವುಗಳಲ್ಲಿ ಕವಿಚರಿತೆ ಹಾಗೂ ವಡ್ಡಾರಾಧನೆಗಳನ್ನು ಸ್ಮರಿಸಬಹುದು. ಹೀಗೆಯೇ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕುರಿತ ಬರೆಹಗಳು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅಲ್ಲಿಯ ಪತ್ರವ್ಯವಹಾರ, ಟೀಕೆ ಟಿಪ್ಪಣಿ, ವಿಮರ್ಶೆ, ಸಾಹಿತ್ಯ ಸಮ್ಮೇಳನಗಳ ವಿವರವಾದ ವರದಿ, ಭಾಷಣಗಳು, ನಿರ್ಣಯಗಳು-ಮುಂತಾದವು ಅಲ್ಲಿ ಮಾತ್ರ ಸಿಗುವ ವಿವರಗಳಾಗಿವೆ. ಕನ್ನಡನಾಡಿನ ಹೊರಗಿರುವ ಇತರ ಭಾಷಾ ಪಂಡಿತರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಹಿಂದಿನಿಂದಲೂ ಇದರಲ್ಲಿ ಪ್ರಕಟವಾಗುವ ಪ್ರತಿಯೊಂದು ಬರೆಹದ ಸಂಕ್ಷಿಪ್ತವಾದ ಇಂಗ್ಲಿಷ್ ಅನುವಾದವನ್ನು ಕೊಡುತ್ತಿದ್ದರು.

ಕಳೆದ ಅರ್ಧ ಶತಮಾನದ ಅವಧಿಯಲ್ಲಿ ವಿದ್ವತ್ ಪ್ರಪಂಚಕ್ಕೆ, ಸಂಶೋಧನ ವಿಭಾಗಕ್ಕೆ, ವಿಮರ್ಶೆಯ ಕ್ಷೇತ್ರಕ್ಕೆ ಪರಿಷತ್ಪತ್ರಿಕೆ ಸಲ್ಲಿಸಿರುವ ಸೇವೆ ಅಸದಳ. ಇಂದಿಗೂ ಪತ್ರಿಕೆಯ ಹಳೆಯ ಸಂಚಿಕೆಗಳು ಕನ್ನಡಕ್ಕೆ ಸಂಬಂಧಿಸಿದ ವಿದ್ವತ್ಪುರ್ಣ ಬರೆಹಗಳಿಗೆ ಅತ್ಯಗತ್ಯ ಆಕರಗ್ರಂಥಗಳಾಗಿವೆ.	(ಎಚ್.ಪಿ.ಎನ್.;ಎಸ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ